ಪರ್ಷಿಯ -
	ನೈಋತ್ಯ ಏಷ್ಯದಲ್ಲಿರುವ ಇರಾನ್ ದೇಶಕ್ಕೆ, ಮುಖ್ಯವಾಗಿ ಯೂರೋಪಿನಲ್ಲೂ ಪಶ್ಚಿಮದ ಇತರ ದೇಶಗಳಲ್ಲೂ, ಹಲವು ಶತಮಾನಗಳಿಂದ ಪ್ರಚಲಿತವಿರುವ ಹೆಸರು. ಇರಾನಿನ ಜನರು ತಮ್ಮ ದೀರ್ಘ ಇತಿಹಾಸದಲ್ಲಿ ಯಾವಾಗಲೂ ತಮ್ಮ ನಾಡನ್ನು ಪರ್ಷಿಯ ಎಂದು ಕರೆದುಕೊಂಡಿಲ್ಲ. ಇರಾನ್ ಎಂದರೆ ಆರ್ಯರ ನಾಡು. ಇರಾನಿನ ಒಂದು ಭಾಗವಾದ ಪರ್ಸಿಸ್‍ನಿಂದ ಇದಕ್ಕೆ ಪರ್ಷಿಯ ಎಂಬ ಹೆಸರು ಬಂದಿದೆ. ಈ ಭಾಗಕ್ಕೆ ಪಾರ್ಸ್, ಪಾರ್ಸ್ ಎಂದೂ ಹೆಸರುಗಳಿದ್ದುವು; ಈಗ ಇದಕ್ಕೆ ಫಾರ್ಸ್ ಎಂಬ ಹೆಸರಿದೆ. ಆರ್ಯರು ವಲಸೆ ಬರುವ ಮೊದಲು ಇರಾನಿನ ಮೂಲನಿವಾಸಿಗಳು ತಮ್ಮದೇ ಆದ ಸಂಸ್ಕøತಿ ಹೊಂದಿದ್ದರು. ಕ್ರಿ.ಪೂ 2500 ಮತ್ತು 2000 ಮಧ್ಯೆ ಆರ್ಯರು ಇರಾನ್ ದೇಶವನ್ನು ಪ್ರವೇಶಿಸದರು. ಅಲ್ಲಿಯ ಪೂರ್ವನಿವಾಸಿಗಳಿಗೂ ಆರ್ಯರ ಬಣಗಳಿಗೂ ಘೋರವಾದ ಹೋರಾಟ ನಡೆದು ಆರ್ಯರು ತಮ್ಮ ಪ್ರಾಬಲ್ಯ ಸ್ಥಾಪಿಸಿದರು.

	ಆಖಿಮೆನಿಯನ್ ಸಾಮ್ರಾಜ್ಯ : ಕ್ರಿ. ಪೂ. 6ನೆಯ ಶತಮಾನದ ಮಧ್ಯ ಭಾಗದಲ್ಲಿ, ಆಖಿಮೆನಿಯನ್ ಸಾಮ್ರಾಜ್ಯಸ್ಥಾಪನೆಯೊಂದಿಗೆ, ಪರ್ಷಿಯದ ಇತಿಹಾಸ ಪ್ರಾರಂಭವಾಗುತ್ತದೆ. (ಪರ್ಷಿಯದ ಪ್ರಾಗಿತಿಹಾಸಕ್ಕೆ ಇರಾನಿನ ಇತಿಹಾಸ ಲೇಖನದ ಪ್ರಾಕ್ತನ ವಿಭಾಗವನ್ನು ನೋಡಿ). ಎರಡನೆಯ ಸೈರಸ್ ಕ್ರಿ. ಪೂ. 559ರ ಸುಮಾರಿನಲ್ಲಿ ಇರಾನಿನ ಬುಡಕಟ್ಟುಗಳನ್ನೆಲ್ಲ ಗೆದ್ದು ಒಂದುಗೂಡಿಸಿ. ಆಖಿಮೆನೀಡ್ ಸಾಮ್ರಾಜ್ಯವನ್ನು ಸ್ಥಾಪಿಸಿದ. ಪರಾಕ್ರಮಿಯಾದ ಸೈರಸ್‍ಮೀಡಿಯ, ಆರ್ಮೇನಿಯ, ಬ್ಯಾಬಿಲೋನಿಯ, ಕಾಲ್ಡಿಯಗಳನ್ನು ಸೋಲಿಸಿ ತನ್ನ ಆಡಳಿತವನ್ನು ವಿಸ್ತರಿಸಿದ. ಇವನು ಕ್ರಿ. ಪೂ. 559ರಿಂದ ಕ್ರಿ. ಪೂ. 530ರ ವರೆಗೆ ಆಳಿದ. ಸೈರಸನ ಮಗನಾದ ಕ್ಯಾಂಬಿಸೀಸ್ (ಆಳ್ವಿಕೆ ಕ್ರಿ. ಪೂ 530-ಕ್ರಿ ಪೂ. 522) ಈಜಿಪ್ಟನ್ನು ಜಯಿಸಿ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನಲ್ಲದೆ ಸೈಪ್ರಸ್ ಮತ್ತು ಕೆಲವು ಗ್ರೀಕ್ ದ್ವೀಪಗಳ ಮೇಲೆ ತನ್ನ ಅಧಿಕಾರ ಸ್ಥಾಪಿಸಿದ. ಈತನ ಮಗನಾದ 2ನೆಯ ಡೇರಿಯಸ್ (ಕ್ರಿ. ಪೂ. 522-ಕ್ರಿ. ಪೊ. 486) 2ನೆಯ ಸೈರಸನಂತೆ ಅತ್ಯಂತ ಪ್ರಸಿದ್ಧ ಚಕ್ರವರ್ತಿ. ಈತನ ಕಾಲದಲ್ಲಿ ಪರ್ಷಿಯನರು ಭಾರತದ ವಾಯವ್ಯ ಭಾಗಗಳನ್ನು ಮುತ್ತಿ ಪಂಜಾಬ್ ಮತ್ತು ಸಿಂಧೂ ಪ್ರದೇಶಗಳನ್ನು ಗೆದ್ದು ತಮ್ಮ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಒಂದನೆಯ ಡೇರಿಯಸನ ಮತ್ತು 1ನೆಯ ಜóಕ್ರ್ಸೀಸóನ (ಕ್ರಿ. ಪೂ. 486-ಕ್ರಿ. ಪೂ. 465) ಕಾಲದಲ್ಲಿ ಗ್ರೀಕರಿಗೂ ಪರ್ಷಿಯನ್ನರಿಗೂ ಭಯಂಕರ ಯುದ್ಧಗಳ ನಡೆದು ಗ್ರೀಕರು ಸೋಲನ್ನಪ್ಪಿದರು.

	ಪೂರ್ವದಲ್ಲಿ ಸಿಂಧೂ ನದಿಯ ತೀರದಿಂದ ಪಶ್ಚಿಮದಲ್ಲಿ ನೈಲ್ ನದಿಯ ವರೆಗೂ ವ್ಯಾಪಿಸಿದ್ದ ಚಕ್ರಾಧಿಪತ್ಯವನ್ನು ಡೇರಿಯಸ್ 20 ಪ್ರಾಂತ್ಯಗಳಾಗಿ ವಿಂಗಡಿಸಿ ಆಡಳಿತದ ಅನುಕೂಲಕ್ಕಾಗಿ ಪ್ರಾಂತ್ಯಾಧಿಕಾರಿಗಳನ್ನು ನೇಮಿಸಿದ. ವ್ಯಾಪಾರದ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ರಸ್ತೆಗಳನ್ನು ನಿರ್ಮಿಸಿದ. ಈತನ ಕಾಲದಲ್ಲಿ ಪರ್ಷಿಯ ಸಾಮ್ರಾಜ್ಯದ ವೈಭವ ಶಿಖರ ಮುಟ್ಟಿತು. 1ನೆಯ ಜóಕ್ರ್ಸೀಸóನ ಅನಂತರ 1ನೆಯ ಆರ್ಟಗ್ಸರ್ಕ್‍ಸೀಸ್ó ಕ್ರಿ. ಪೂ. 465-ಕ್ರಿ. ಪೂ. 424ರಲ್ಲಿ ರಾಜ್ಯವಾಳಿದ. ಅನಂತರ ಬಂದ 2ನೆಯ ಜóಕ್ರ್ಸೀಸóನ (ಕ್ರಿ. ಪೂ. 424-423) ಕಾಲದಲ್ಲಿ ಪರ್ಷಿಯ ಮತ್ತು ಗ್ರೀಸ್ ನಡುವೆ ಯುದ್ಧಗಳು ನಡೆದುವು. ಪರ್ಷಿಯನರು ಗ್ರೀಕರಿಂದ ಸೋಲನ್ನೊಪ್ಪಿದರು. ಕ್ರಮೇಣ ಪರ್ಷಿಯ ಸಾಮ್ರಾಜ್ಯದ ಕ್ಷೀಣಗತಿ ಉಂಟಾಯಿತು. ಮ್ಯಾಸೆಡೋನಿಯದ ಅಲೆಗ್ಸಾಂಡರ್ ಮಹಾಶಯ ಗ್ರೀಕ್ ದ್ವೀಪಗಳನ್ನೆಲ್ಲ ಒಂದುಗೂಡಿಸಿ ಪರ್ಷಿಯ ಸಾಮ್ರಾಜ್ಯದ ಮೇಲೆ ಯುದ್ಧ ಹೂಡಿದ. ಆಖಿಮೆನೀಡ್ ಸಂತತಿಯ ಕೊನೆಯ ಚಕ್ರವರ್ತಿ 3ನೆಯ (ಕ್ರಿ.ಪೂ 336/335-ಕ್ರಿ. ಪೂ. 330) ಕೊಲೆ ಹೊಂದಿದ.

	ಆಖಿಮೆನೀಡ್ ಸಂತತಿಯ ಸುಮಾರು 200 ವರ್ಷಗಳ ಆಳ್ವಿಕೆಯಲ್ಲಿ ಪರ್ಷಿಯದಲ್ಲಿ ನಾಗರಿಕತೆ ಬೆಳೆಯಿತು. ಚಕ್ರವರ್ತಿಗಳು ಒಳ್ಳೆಯ ಆಡಳಿತಗಾರರಾಗಿದ್ದು ಸಾಹಿತ್ಯ ಕಲೆ ವ್ಯಾಪಾರ ವ್ಯವಸಾಯಗಳನ್ನು ಪ್ರೋತ್ಸಾಹಿಸಿದರು. ಪರ್ಷಿಯನ್, ಎಲಾಮೈಟ್ ಮತ್ತು ಅಕ್ಕೇಡಿಯನ್ ಆಡಳಿತ ಭಾಷೆಗಳಾಗಿದ್ದವು. ಈ ಭಾಷೆಗಳಲ್ಲಿ ಅನೇಕ ಶಾಸನಗಳನ್ನು ಹಾಕಿಸಿದ್ದಾರೆ. ಜನರು ಅನೇಕ ದೇವ ದೇವತೆಗಳನ್ನು ಪೂಜಿಸುತ್ತಿದ್ದರು. ಮುಖ್ಯವಾಗಿ ಜಾóರತೂಷ್ಟ್ರ ಮತವನ್ನು ಜನರು ಅನುಸರಿಸುತ್ತಿದ್ದರು ವ್ಯವಸಾಯಕ್ಕಾಗಿ ಕಾಲುವೆಗಳೂ ವ್ಯಾಪಾರಕ್ಕಾಗಿ ಹೆದ್ದಾರಿಗಳೂ ಈ ಕಾಲದಲ್ಲಿ ನಿರ್ಮಿತವಾದುವು. ವಾಸ್ತುಶಿಲ್ಪಕಲೆಗೆ ಚಕ್ರವರ್ತಿಗಳು ವಿಶೇಷ ಪ್ರೋತ್ಸಾಹ ನೀಡಿದರು. ಅಂದವಾದ ಅರಮನೆಗಳು, ಸುಂದರವಾದ ಕೆತ್ತನೆಯ ಕೆಲಸದಿಂದ ಕೂಡಿದ ಶಿಲ್ಪಕೃತಿಗಳೂ ಆ ಕಾಲದಲ್ಲಿ ರಚಿತವಾದುವು.

	ಗ್ರೀಕರ ಆಕ್ರಮಣ: ಮೂರನೆಯ ಡೇರಿಯಸ್ಸನ ಕೊಲೆಯ ಅನಂತರ ಅಲೆಗ್ಸಾಂಡರ್ ಕೊಲೆಗಡುಕರನ್ನು ಶಿಕ್ಷಿಸಿ ತಾನು ಪರ್ಷಿಯ ಸಾಮ್ರಾಜ್ಯದ ಚಕ್ರವರ್ತಿಯೆಂದು ಘೋಷಿಸಿಕೊಂಡ. ಗ್ರೀಕ್ ಮತ್ತು ಪರ್ಷಿಯನ್ ಸಂಸ್ಕøತಿಗಳ ಸಾಮರಸ್ಯಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡ. ಅಲೆಗ್ಸಾಂಡರ್ ಪಂಜಾಬ್ ಮತ್ತು ಸಿಂಧೂ ಪ್ರದೇಶಗಳನ್ನು ಗೆದ್ದು ಪರ್ಷಿಯದ ಮುಖಾಂತರ ತನ್ನ ದೇಶಕ್ಕೆ ಹಿಂದಿರುಗುವಾಗ ಕ್ರಿ. ಪೂ. 323ರಲ್ಲಿ ಬ್ಯಾಬಿಲಾನ್ ನಗರದಲ್ಲಿ ಅಕಾಲ ಮರಣಕ್ಕೀಡಾದ. ಆತ ಜಯಿಸಿದ್ದ ವಿಶಾಲ ಸಾಮ್ರಾಜ್ಯದಲ್ಲಿ ಆತನ ಮರಣಾನಂತರ ಅಧಿಕಾರಕ್ಕಾಗಿ ತಿಕ್ಕಾಟ ಪ್ರಾರಂಭವಾಯಿತು. ಏಷ್ಯ ಖಂಡದಲ್ಲಿ ಅಲೆಗ್ಸಾಂಡರ್ ಗೆದ್ದಿದ್ದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಆತನ ಸೈನ್ಯಾಧಿಕಾರಿಗಳಾದ ಆಂಟಿಗೊನಸ್ (ಕ್ರಿ.ಪೂ. 382-ಕ್ರಿ.ಪೂ. 301) ಮತ್ತು ಸಿಲ್ಯೂಕಸರ (ಕ್ರಿ.ಪೂ. 358 ?-ಕ್ರಿ.ಪೂ. 280) ಮಧ್ಯೆ ಪೈಪೋಟಿ ನಡೆಯಿತು. ಕ್ರಿ.ಪೂ. 312ರಲ್ಲಿ ಸಿಲ್ಯೂಕಸ್ ಪರ್ಷಿಯದ ಮೇಲೆ ಕಳೆದುಹೋಗಿದ್ದ ಅಧಿಕಾರವನ್ನು ಸ್ಥಾಪಿಸಿದ. ಭಾರತದ ಪ್ರದೇಶಗಳನ್ನು ಪುನಃ ವಶಪಡಿಸಿಕೊಳ್ಳಲು ಸಿಲ್ಯೂಕಸ್ ಯತ್ನಿಸಿದ. ಚಂದ್ರಗುಪ್ತ ಮೌರ್ಯನಿಂದ ಸೋಲನ್ನನುಭವಿಸಿದ ಸಿಲ್ಯೂಕಸ್ ಅವನಿಗೆ ಕಾಬೂಲ್, ಕಾಂದಾಹಾರ್, ಹಿರಾತ್ ಪ್ರದೇಶಗಳನ್ನು ಬಿಟ್ಟುಕೊಡಲು ಒಪ್ಪಿಕೊಂಡ ಅನಂತರ ಪಶ್ಚಿಮದ ಕಡೆ ತಿರುಗಿ ಸಿರಿಯ ಮತ್ತು ಮೆಸೊಪೊಟೇಮಿಯದ ಹಲವು ಭಾಗಗಳನ್ನು ಗೆದ್ದು ಆಂಟಿಯೋಕನ್ನು ರಾಜಧಾನಿಯಾಗಿ ಮಾಡಿಕೊಂಡ. ಸಿಲ್ಯೂಕಸನ ಉತ್ತರಾಧಿಕಾರಿಯಾದ 1ನೆಯ ಆಂಟಿಯೊಕಸ್ ಗ್ರೀಕ್ ಸಂಸ್ಕøತಿಯ ಪ್ರಭಾವವನ್ನು ಸ್ಥಾಪಿಸಲು ಪರ್ಷಿಯ, ಮಿಡಿಯ ಮತ್ತು ಬ್ಯಾಕ್ಟ್ರಿಯ ಪ್ರದೇಶಗಳಲ್ಲಿ ಅನೇಕ ಹೊಸ ನಗರಗಳನ್ನು ನಿರ್ಮಿಸಿ ಗ್ರೀಕ್ ಸಂಸ್ಕøತಿಯ ವಸಾಹತುಗಳನ್ನು ಸ್ಥಾಪಿಸಿದ. ಅಲ್ಲಿ ನೆಲಸಿದ ಗ್ರೀಕ್ ಪ್ರಜೆಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟ. ಈ ಕಾರಣಗಳಿಂದ ಪರ್ಷಿಯ ಮತ್ತು ಮಧ್ಯ ಏಷ್ಯ ಪ್ರದೇಶಗಳಲ್ಲಿ ಹೆಲೆನಿಕ್ ಸಂಸ್ಕøತಿಯ ಪ್ರಭಾವಕ್ಕೊಳಗಾಗಲಿಲ್ಲ. ತಮ್ಮ ಮತವನ್ನೂ ಆಖಿಮೆನೀಡ್ ಸಾಮ್ರಾಜ್ಯದ ಸವಿನೆನಪನ್ನೂ ಮುಂದುವರೆಸಿಕೊಂಡು ಬಂದರು.

	ಎರಡನೆಯ ಸಿಲ್ಯೂಕಸನ ಆಳ್ವಿಕೆಯ (ಕ್ರಿ. ಪೂ. 247-ಕ್ರಿ. ಪೂ. 226) ಕಾಲದಲ್ಲಿ ಪಾರ್ಥಿಯದಲ್ಲಿ ದಂಗೆಯಿಂದಾಗಿ ಅದು ಸ್ವತಂತ್ರವಾಯಿತು. ಪರ್ಷಿಯದ ಇತರ ಭಾಗಗಳಲ್ಲೂ ಸಿಲ್ಯೂಸಿಡ್ ಸಂತತಿಯ ವಿರುದ್ಧ ದಂಗೆಗಳಾದವು. ಕ್ರಿ.ಪೂ. 2ನೆಯ ಶತಮಾನದ ಮಧ್ಯಭಾಗದಲ್ಲಿ ಸಿಲ್ಯೂಸಿಡ್ ಆಳ್ವಿಕೆ ಕೊನೆಗೊಂಡಿತು.

	ಪಾರ್ಥಿಯನರ ಆಳ್ವಿಕೆ : ಪರ್ಷಿಯ ದೇಶ ಸಿಲ್ಯೂಕಸ್ ಸಾಮ್ರಾಜ್ಯದ ಪತನಾನಂತರ ಸ್ಥಾಪಿತವಾದ ಪಾರ್ಥಿಯನ್ ಸಾಮ್ರಾಜ್ಯದ ಭಾಗವಾಯಿತು. ಆರ್ಸಾಸಿಡೀ ಎಂದು ಕರೆಯಲಾಗಿರುವ ಈ ಸಂತತಿಯ ಅರಸರು ಪರ್ಷಿಯ ಮತ್ತು ಮಧ್ಯ ಏಷ್ಯದ ಮೇಲೆ ಆಡಳಿತ ಸ್ಥಾಪಿಸಿದ್ದರು. ಈ ಮನೆತನದ ಆಡಳಿತ ಕಾಲ ಸುಗಮವಾಗಿರಲಿಲ್ಲ. ಪ್ರಾರಂಭದಲ್ಲಿ ಗ್ರೀಕ್ ಮತ್ತು ಅನಂತರ ರೋಮನ್ ಚಕ್ರಾಧಿಪತ್ಯದೊಡನೆ ನಿರಂತರವಾಗಿ ಯುದ್ಧಗಳನ್ನು ನಡೆಯುತ್ತಿದ್ದುವು. ಆಂತರಿಕ ದಂಗೆಗಳನ್ನೂ ಪರಕೀಯರ ದಾಳಿಗಳನ್ನೂ ಆಗಿಂದಾಗ್ಗೆ ಹತ್ತಿಕ್ಕಲಾಯಿತು. ಪಾರ್ಥಿಯನ್ ದೊರೆಗಳು ಗೆದ್ದ ಪ್ರದೇಶದಲ್ಲಿ ಸಾಂಸ್ಕøತಿಕ ಮತ್ತು ರಾಜಕೀಯ ಏಕತೆಯನ್ನು ಮೂಡಿಸಲು ಪ್ರಯತ್ನಿಸಲಿಲ್ಲ.

	ಪಾರ್ಥಿಯನ್ನರಿಗೆ ತಮ್ಮದೇ ಆದ ಧಾರ್ಮಿಕ ಭಾವನೆಗಳಿರಲಿಲ್ಲ. ಪ್ರಾರಂಭದಲ್ಲಿ ಈ ಮನೆತನದ ಸ್ಥಾಪಕನಾದ ಅರ್ಸಾಸಿಸನನ್ನು ಪೂಜಿಸಲಾಗುತ್ತಿತ್ತು. ಕ್ರಮೇಣ eóÁರತೂಷ್ಟ್ರ ಮತದ ಪದ್ಧತಿಗಳನ್ನನುಸರಿಸಿ ಸೂರ್ಯ ಆರಾಧನೆ ಪ್ರಮುಖವಾಯಿತು. ಗ್ರೀಕ್, ಯಹೊದ್ಯ. ಮತ್ತು ಅನಂತರ ಸ್ಥಾಪಿತವಾದ ಕ್ರೈಸ್ತಮತವನ್ನು ಪಾರ್ಥಿಯನರು ವಿರೋಧಿಸಲಿಲ್ಲ. 1ನೆಯ ವಾಲೊಜೀಸಸ್ ಅವೆಸ್ತ ಗ್ರಂಥಕ್ಕೆ ಸಂಬಂಧಿಸಿದ ಸಾಹಿತ್ಯವನ್ನೆಲ್ಲ ಕಲೆಹಾಕಿಸಿದ್ದ. ಇವರ ನಾಣ್ಯಗಳ ಮೇಲೆ ಗ್ರೀಕ್ ದೇವತೆಗಳ ಸಾಹಿತ್ಯವನ್ನೆಲ್ಲ ಕಲೆಹಾಕಿಸಿದ್ದ. ಇವರ ನಾಣ್ಯಗಳ ಮೇಲೆ ಗ್ರೀಕ್ ದೇವತೆಗಳ ಚಿತ್ರಗಳೂ ಲಿಪಿಯೂ ಕಾಣಬಂದಿವೆ. ಪಾರ್ಥಿಯನ್ ಸಾಮ್ರಾಜ್ಯದಲ್ಲಿ ಸ್ಥಳೀಯ ಭಾಷೆಗಳ ಜೊತೆಗೆ ಗ್ರೀಕ್ ಭಾಷೆ ಪ್ರಚಲಿತವಾಗಿತ್ತು. ಅಂತರ್ಯುದ್ಧಗಳಿಂದ ಮತ್ತು ರೋಮನ್ ಸಾಮ್ರಾಜ್ಯದೊಡನೆ ನಿರಂತರವಾಗಿ ನಡೆದ ಯುದ್ಧಗಳಿಂದ ಪಾರ್ಥಿಯನರ ಅಧಿಕಾರ ದುರ್ಬಲವಾಯಿತು. ಈ ಸಂತತಿಯ ಕೊನೆಯ ರಾಜನಾದ 5ನೆಯ ಆರ್ಟಬೇನಸನನ್ನು (ಆಳ್ವಿಕೆ 209-?227) ಪರ್ಷಿಯದ ಆರ್ದಷಿರ್ 224ರಲ್ಲಿ ಸೋಲಿಸಿ ತನ್ನ ಆಡಳಿತವನ್ನು ಸ್ಥಾಪಿಸಿದ.

	ಸ್ಯಾಸ್ಯಾನಿಡೀ ಸಂತತಿ : 224-637. ಆರ್ದಷಿರನಿಂದ ಸ್ಥಾಪಿತವಾದ ಸಂತತಿಯಿದು. ಈತ ಪರ್ಷಿಯದ ಒಂದು ಚಿಕ್ಕ ಪ್ರದೇಶದ ಮುಖಂಡನಾಗಿದ್ದ. ಇವನು ದುರ್ಬಲರಾದ ಪಾರ್ಥಿಯನರ ಆಳ್ವಿಕೆಯನ್ನು ಕೊನೆಗೊಳಿಸಿದ. ಪರ್ಷಿಯ ಪರಕೀಯರ ಪ್ರಭಾವದಿಂದ ಪಾರಾಯಿತು. ಈತ ಇರಾನ್ ರಾಜರ ರಾಜ ಎಂಬ ಬಿರುದು ಧರಿಸಿದ. ಪಾರ್ಥಿಯನರ ಆಡಳಿತಪದ್ಧತಿಯನ್ನು ಈತ ಪುನಃ ಸ್ಥಾಪಿಸಿದ. ಆರ್ದಷಿರ್ eóÁರತೂಷ್ಟ್ರ ಮತವನ್ನು ವಿಶೇಷವಾಗಿ ಪ್ರೋತ್ಸಾಹಿಸಿದ. ಈತ 241ರಲ್ಲಿ ಮರಣಹೊಂದಿದ.

	ಆರ್ದಷಿರನ ಮಗನಾದ 1ನೆಯ ಷಾಪೂರನೂ (ಆ.241-272) ತಂದೆಯಂತೆ ವೀರ. ಪರ್ಷಿಯದ ಚರಿತ್ರೆಯಲ್ಲಿ ಈತನ ಆಳ್ವಿಕೆಯಲ್ಲಿ ರೋಮ್ ಮತ್ತು ಪರ್ಷಿಯ ಪ್ರಭುತ್ವಗಳ ಮಧ್ಯೆ ಅನೇಕ ಯುದ್ಧಗಳನ್ನು ನಡೆದುವು. 260ರಲ್ಲಿ ಇವನು ರೋಮನ್ ಚಕ್ರವರ್ತಿ ವೆಲೀರಿಯನ್ ಸೋಲಿಸಿ ಸೆರೆ ಹಿಡಿದ. ವೆಲೀರಿಯನನ್ನು ಸೆರೆಯಾಳಾಗಿ ಪರ್ಷಿಯದಲ್ಲಿ ಸಾವನ್ನಪ್ಪಿದ. ಒಂದನೆಯ ಷಾಪೂರ್ ಇರಾನಿ ಮತ್ತು ಇರಾನೇತರ ರಾಜರ ರಾಜ ಎಂಬ ಬಿರುದು ಧರಿಸಿದ. ತನ್ನ ಸಾಮ್ರಾಜ್ಯವನ್ನು 27 ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಸುಭದ್ರ ಆಡಳಿತ ಸ್ಥಾಪಿಸಿದ. ಮತ, ಸಾಹಿತ್ಯ ಮತ್ತು ಕಲೆಗೆ ವಿಶೇಷ ಪ್ರೋತ್ಸಾಹ ನೀಡಿದ. ವ್ಯಾಪಾರ ಅಭಿವೃದ್ಧಿಸ್ಥಿತಿಯಲ್ಲಿತ್ತು. ಅನೇಕ ಸುಂದರ ನಗರಗಳು ಮತ್ತು ಮಂದಿರಗಳು ಇವನ ಕಾಲದಲ್ಲಿ ನಿರ್ಮಾಣವಾದವು. 

	ಒಂದನೆಯ ಷಾಪೂರನ ಅನಂತರ ಈ ಮನೆತನದ ಅನೇಕ ಚಕ್ರವರ್ತಿಗಳು ಆಳಿದರು. ರೋಮನ್ ಸಾಮ್ರಾಜ್ಯದೊಡನೆ ಆಗಾಗ ಯುದ್ಧಗಳು ನಡೆಯುತ್ತಿದ್ದುವು. ಪರ್ಷಿಯ ಸಾಮ್ರಾಜ್ಯದ ಹಲವು ಭಾಗಗಳು ರೋಮನರ ವಶವಾದುವು. 337ರಿಂದ 379ರ ವರೆಗೆ ಆಳಿದ 2ನೆಯ ಷಾಪೂರನ ಕಾಲದಲ್ಲಿ ಪರ್ಷಿಯ ಸಾಮ್ರಾಜ್ಯದ ಘನತೆ ಇಮ್ಮಡಿಸಿತು. ಷಾಪೂರ್ ತನ್ನ ಹಿಂದಿನವರ ಆಳ್ವಿಕೆಯ ಕಾಲದಲ್ಲಿ ಕೈಬಿಟ್ಟು ಹೋಗಿದ್ದ ಸಾಮ್ರಾಜ್ಯಭಾಗಗಳನ್ನು ಪುನಃ ವಶಪಡಿಸಿಕೊಂಡ. ಆ ವೇಳೆಗೆ ಪ್ರಾರಂಭವಾಗಿದ್ದ ಹೂಣರ ದಾಳಿಯನ್ನು ಹಿಮ್ಮೆಟ್ಟಿಸಿದ. ನೀಷಪುರ್ ಎಂಬ ಹೊಸ ಪಟ್ಟಣವನ್ನು ಕಟ್ಟಿಸಿದ. ಷಾಪೂರನ ಆಳ್ವಿಕೆಯ ಕಾಲದಲ್ಲಿ ಪರ್ಷಿಯ ಸಾಮ್ರಾಜ್ಯದ ಕೀರ್ತಿ ಹೆಚ್ಚಿತು. ಈತನ ಅನಂತರ 2ನೆಯ ಆರ್ದಷಿರ್, 3ನೆಯ ಷಾಪೂರ್ ಮತ್ತು ಇತರ ಅನೇಕ ಚಕ್ರವರ್ತಿಗಳು ಆಳಿದರು.
ಒಂದನೆಯ ಖುಸ್ರಾ 531ರಿಂದ 579ರ ವರೆಗೆ ಆಳಿದ. ಈತನ ಕಾಲದಲ್ಲೂ ರೋಮನ್ ಮತ್ತು ಇರಾನ್ ಚಕ್ರಾಧಿಪತ್ಯಗಳ ಮಧ್ಯೆ ನಿರಂತರವಾದ ಹೋರಾಟಗಳು ನಡೆದುವು. ಕೊನೆಗೆ ಜಸ್ಟಿನಿಯನ್ ಮತ್ತು ಖುಸ್ರೌ ಇವರ ಮಧ್ಯೆ ಶಾಂತಿಯ ಒಪ್ಪಂದ ಏರ್ಪಟ್ಟಿತು. ಖುಸ್ರೌನ ಕಾಲದಲ್ಲಿ ಸಾಹಿತ್ಯ ಮತ್ತು ಕಲೆ ವಿಶೇಷ ಅಭಿವೃದ್ಧಿ ಹೊಂದಿದುವು. ಇವನು ಅನಂತರ ಆಳಿದ ಚಕ್ರವರ್ತಿಗಳು ಅಷ್ಟು ಸಮರ್ಥರಾಗಿರಲಿಲ್ಲ. ಸ್ಯಾಸ್ಯಾನಿಯನ್ ಸಂತತಿಯಲ್ಲಿ 3ನೆಯ ಯಾಜ್ಡೆóಗರ್ಡ್ (ಆಳ್ವಿಕೆ 632-641) ಕೊನೆಯವನು. 637ರಲ್ಲಿ ಸ್ಯಾಸ್ಯಾನಿಯನ್ ಸಾಮ್ರಾಜ್ಯ ಅರಬರ ದಾಳಿಗೆ ಒಳಗಾಯಿತು. ಸ್ಯಾಸ್ಯಾನಿಯನ್ ಸಂತತಿಯ ಪತನದ ಜೊತೆಯಲ್ಲೇ ಇರಾನಿನಲ್ಲಿ ಜಾóರತೂಷ್ಟ್ರ ಮತವೂ ಪತನ ಹೊಂದಿತು. ಇಸ್ಲಾಂ ಮತ ಇರಾನಿನಲ್ಲಿ ಹರಡಿತು. ಜಾóರತೂಷ್ಟ್ರ ಮತದ ಹಲವರು ಭಾರತಕ್ಕೆ ಬಂದು ನೆಲಸಿದರು.

	ಇರಾನಿನ ಚರಿತ್ರೆಯಲ್ಲಿ ಸ್ಯಾಸ್ಯಾನಿಯನ್ ಮನೆತನವೂ ಪ್ರಸಿದ್ಧವಾದ್ದು. ಸುಮಾರು ಮೂರುವರೆ ಶತಮಾನಗಳ ಕಾಲ ಇರಾನ್ ಸಾಮ್ರಾಜ್ಯ ಪ್ರತಿಷ್ಠೆ ಹೊಂದಿತ್ತು. ಈ ಮನೆತನದ ಚಕ್ರವರ್ತಿಗಳು ಶತ್ರುಗಳ ದಾಳಿಗಳಿಂದ ಸಾಮ್ರಾಜ್ಯವನ್ನು ರಕ್ಷಿಸಿದರಲ್ಲದೆ ಸಾಹಿತ್ಯ, ಕಲೆ, ವ್ಯಾಪಾರ ಮುಂತಾದವನ್ನು ಅಭಿವೃದ್ಧಿಪಡಿಸಿದರು. ಪಾಹ್ಲವಿ ಭಾಷೆಯಲ್ಲಿ ಅನೇಕ ದಾರ್ಶನಿಕ ಮತ್ತು ಧಾರ್ಮಿಕ ಗ್ರಂಥಗಳು ರಚನೆಯಾದವು. ಗ್ರೀಸ್ ಮತ್ತು ಭಾರತದ ಅನೇಕ ಗ್ರಂಥಗಳ ಪಾಹ್ಲವಿ ಭಾಷೆಗೆ ತರ್ಜುಮೆಯಾದುವು. ಜಾóರತೂಷ್ಟ್ರ ಮತ ವಿಶೇಷ ಅಭಿವೃದ್ಧಿ ಹೊಂದಿತು. ಈ ಚಕ್ರವರ್ತಿಗಳು ಕಲೆಗೆ ವಿಶೇಷ ಪ್ರೋತ್ಸಾಹ ನೀಡಿದರು. ಇವರು ಕಟ್ಟಿಸಿದ ಪ್ರಸಿದ್ಧ ಅರಮನೆಗಳು, ಶಿಲ್ಪಕೃತಿಗಳು, ಮತ್ತು ಇವರು ಬರೆಯಿಸಿದ ಸುಂದರವಾದ ಹಲವು ಭಿತ್ತಿ ಚಿತ್ರಗಳು ಇಂದಿಗೂ ಇವೆ. ಇಲ್ಲಿಂದ ಮುಂದಿನ ಇತಿಹಾಸಕ್ಕೆ (ನೋಡಿ- ಇರಾನಿನ-ಇತಿಹಾಸ).
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ